ಮನುಷ್ಯ ತನ್ನ ಮೂರು ಹೊತ್ತಿನ ಅನ್ನವನ್ನು ಹೇಗೋ ಸಂಪಾದಿಸಬಲ್ಲ. ಜೀವನವನ್ನೇ ಮುಡಿಪಾಗಿಟ್ಟು ತಾನು ಅಂದುಕೊಂಡಿದ್ದನ್ನು ಸಾಧಿಸಬಲ್ಲ. ಆದರೆ ಬದುಕಿನ ನಿಜವಾದ ಆನಂದವನ್ನು ನೆಮ್ಮದಿಯನ್ನು ಪಡೆದುಕೊಳ್ಳುವುದರಲ್ಲಿ  ಅವನು ಸೋಲುವುದೇಕೆ ? ಎಲ್ಲಿ ಸೋತಿರಬಹುದು ? ಬಂಗಲೆ, ಕಾರು,ಭೂರಿ ಭೋಜನ, ಅಂತಸ್ತು, ಗೌರವ.. ಹೀಗೆ ಜೀವನದ ಎಲ್ಲಾ ಸೌಕರ್ಯಗಳಿರುವ ಮನುಷ್ಯ ಮಾತ್ರ ದು:ಖಿ, ಒಂಟಿ ಎನಿಸಿಕೊಳ್ಳುವುದೇಕೆ?

ಮನುಷ್ಯ ತನ್ನ ಸಹಜ ಸ್ವಭಾವವಾದ ಪ್ರೀತಿ, ಕರುಣೆ, ದಯೆ ಮತ್ತು ಮಾನವೀಯತೆಯನ್ನು ಮರೆತು ಬಾಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಸೇಡು, ಕೋಪ, ಅಹಂಕಾರ ದ್ವೇಷದ ಹೊಗೆ, ಹಗೆತನವನ್ನು ಹುಟ್ಟು ಹಾಕುತ್ತದೆ ! ಇವುಗಳೆಲ್ಲದರ ಮೂಲ ಹುಡುಕುತ್ತಾ ಹೋದರೆ, ಅಲ್ಲಿ ಸ್ವಾರ್ಥ ಮತ್ಸರ ಹೆಡೆಯೆತ್ತಿ ನಿಂತಿರುವುದು ಕಾಣಿಸುತ್ತದೆ. ನಾಲಿಗೆಯಿಂದ ಪ್ರಾರಂಭವಾದ ಮಾತಿನ ಕಿಡಿ ಕಾರಣಗಳೇ ಬೇಕಿಲ್ಲದೆ ದ್ವೇಷದ ಕಿಚ್ಚನ್ನು ಹೊತ್ತಿಸಿ ಅದನ್ನು ಹರಡಿಯೇ ಬಿಡುತ್ತದೆ. ಈ ಶಾಖದ ತಾಪಕ್ಕೆ  ಸಿಲುಕಿದ ಮನುಷ್ಯ ತನ್ನನ್ನು ಮೊದಲು ಸುಟ್ಟುಕೊಂಡು ಆಮೇಲೆ ಇತರರನ್ನು ಸುಟ್ಟು ಬಿಡುತ್ತಾನೆ.

ತನ್ನ ”ಅಹಂ’ ಗೆ ಪೆಟ್ಟು ಬಿದ್ದಾಗ ಆತ ಹೆಡೆ ತುಳಿದ ಸರ್ಪದಂತಾಗಿ, ವಿವೇಕ ವಿವೇಚನೆಯನ್ನೇ ಕಳೆದುಕೊಂಡು ತನ್ನ ಎದುರಾಳಿಯ ಸರ್ವ ನಾಶಕ್ಕಾಗಿ ಹೊಂಚುಹಾಕುತ್ತಾ, ತನ್ನ ನೆಮ್ಮದಿ ಶಾಂತಿಯನ್ನು ಕಳೆದುಕೊಂಡು ಇತರರ ನೆಮ್ಮದಿಯನ್ನು ಕೂಡ ಭಂಗ ಪಡಿಸುತ್ತಾನೆ.

ನಿತ್ಯ ಆನಂದ ನೆಮ್ಮದಿ ಸಂತೋಷದಿಂದಿರಲು ಒಂದೇ ಒಂದು ದಿವ್ಯ ಪರಿಹಾರವೆಂದರೆ, ತಪ್ಪು ಘಟಿಸಿದ ತಕ್ಷಣ ಎಚ್ಚೆತ್ತು, ಕ್ಷಮಿಸಿ ಮರೆತು ಬಿಡುವುದು. ಹಾಗೆಯೇ ತಪ್ಪು ಮಾಡಿದವರು ಎಲ್ಲಾ ಅಹಂನ್ನು ಹಿಂಜರಿಕೆಯನ್ನು ಬದಿಗೊತ್ತಿ ಕ್ಷಮೆ ಕೇಳಿ ಬಿಡುವುದು.  ಆ ದಿನದ ಲೆಕ್ಕವನ್ನು ಅಂದೇ ಚುಕ್ತಾ ಮಾಡುವುದೆಂದರೆ, ದೊಡ್ಡದೊಂದು ದ್ವೇಷದ ಕೂಪದಿಂದ ಬಚಾವಾಗಿ ಬಿಡುವುದು !

ಕ್ಷಮೆ ಯಾಚಿಸಿ ಬಂದವರಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಿಂದಿಸದೇ ನಿರ್ಮಲ ಚಿತ್ತದಿಂದ ಕ್ಷಮಿಸಿದರೆ, ಬೇರ್ಪಟ್ಟ ಎರಡು ಜೀವಗಳು ಮತ್ತೆ ಒಂದಾಗುತ್ತವೆ. ಪಶ್ಚಾತ್ತಾಪ ಪಡುವವನನ್ನು ಕ್ಷಮಿಸಿದವನು ದೊಡ್ಡವನಾಗುತ್ತಾನೆ. ಮಾಡಿದ ತಪ್ಪನ್ನು ಅಹಂವಿಲ್ಲದೆ ಒಪ್ಪಿ ಕ್ಷಮೆ ಯಾಚಿಸುವವನು ಕೂಡ ದೊಡ್ಡವನೇ ಸರಿ!
ಕ್ರೋಧದಿಂದ ಕವಲೊಡೆದ ಎರಡು ವೈರಿಗಳ ದಾರಿ ಒಂದಾದಾಗ ಸ್ವರ್ಗ ಲೋಕದಲ್ಲೂ ಉತ್ಸವ ನಡೆಯುತ್ತದೆ!

ವೈಲೆಟ್ ಪಿಂಟೋ,ಕನ್ನಡ ಉಪನ್ಯಾಸಕರು,
ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು,ಅರಸೀಕೆರೆ

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]