’ಮನೆ’ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಬೀದಿಯಲ್ಲಿ ಎದ್ದು ಕಾಣುವ ಟೆರೇಸ್, ಥಳಥಳಿಸುವ ಗ್ರೆನೈಟ್ನೆಲ, ವಿಶಾಲ ರೂಮುಗಳು, ಆಕರ್ಷಕ ಬಣ್ಣದ ಗೋಡೆಗಳು, ಗಾಳಿಗೆ ಓಲಾಡು ವಮನ ಮೋಹಕ ಕರ್ಟನ್ಗಳು, ಹಚ್ಚ ಹಸುರಿನ ಸುಂದರ ಪುಟ್ಟ ಗಾರ್ಡನ್, ಅತ್ಯಾಧುನಿಕ ಉಪಕರಣಗಳು, ಮನೆಯಲ್ಲಿ ಜನರಿದ್ದಾರೋ ಇಲ್ಲವೋ ಎನಿಸುವಷ್ಟು ಸ್ಮಶಾನ ಮೌನ !....ಹೀಗೆ ಸಕಲ ವೈಭವಗಳ ಮನೆಯನ್ನು ಕಲ್ಪಿಸುವುದಕ್ಕಿಂತ, ಚಿಕ್ಕದಾದರೂ ಚೊಕ್ಕಟವಾದ ಮನೆ.  ಇಡೀಮನೆಗೆ ಕಲಶ ಪ್ರಾಯವಾಗಿರುವ ಹಸನ್ಮುಖಿ ತಂದೆ-ತಾಯಿ, ಮನೆಯಿಡೀ ಚಿಲಿಪಿಲಿ ಗುಟ್ಟುತ್ತಿರುವ ಮಕ್ಕಳು, ಶಾಂತಿ ಸೌಹಾರ್ದತೆ, ಪ್ರೀತಿ-ವಿಶ್ವಾಸ ಒಗ್ಗಟ್ಟಿನಿಂದ ಭದ್ರವಾಗಿರುವ ಮನೆಯನ್ನು ಕಲ್ಪಿಸಿದಾಗ ಹೇಗಿರುತ್ತದೆ?

ಬದುಕು ದಿನೇ ದಿನೇ ಯಾಂತ್ರೀಕೃತವಾಗುತ್ತಿರುವ ಈ ಯುಗದಲ್ಲಿ ಮನುಷ್ಯ-ಮನುಷ್ಯನ ನಡುವಣ ಸಂಬಂಧ ಸಂಪರ್ಕಗಳು ಬರೀ ವ್ಯಾವಾಹಾರಿಕವಾಗಲು ತೊಡಗಿದೆ.  ಸ್ಪರ್ಧಾತ್ಮ ಕಪ್ರ ಪಂಚದಲ್ಲಿ ಮನುಷ್ಯನನ್ನು ಗುರುತಿಸುವುದು, ಗೌರವಿಸುವುದು ಆತನ ಪ್ರತಿಷ್ಠೆ, ಸಿರಿವಂತಿಕೆಯ ಮೇಲೆಯೇ ! ಜೀವನ ಮೂರು ದಿನಗಳ ಪ್ರಯಾಣವೆಂಬಂತೆ ಇರುವವನನ್ನು’ಕ್ಯಾರೇ’ಎನ್ನದು ಈ ಸಮಾಜ.  ಪ್ರೀತಿ-ಪ್ರೇಮ-ಸ್ನೇಹದಂತಹ ಅಮೂಲ್ಯ ಸತ್ಯಗಳು ಸವಕಲು ನಾಣ್ಯದಂತಾಗಿ ಚಲಾವಣೆಯ ವರ್ಚಸ್ಸನ್ನು ಕಳೆದು ಕೊಳ್ಳುತ್ತಿದೆ. ಸೂರ್ಯೊದಯವನ್ನೇ ಕಾಯುತ್ತಿದ್ದು ನಿಮಿಷ ನಿಮಿಷವನ್ನು ದುಡ್ಡಿನ ಲೆಕ್ಕಾಚಾರದಿಂದಲೇ ಕಳೆಯುತ್ತಾ, ಬೆವರಿಳಿಸಿ ಸರ್ಕಸ್ಮಾಡಿದರೂ, ಸಂಜೆಗತ್ತಲು ಆವರಿಸಿದಂತೆಯೆ ಏಕ್ದಂ ಒಂಟಿತನ ಕಾಡಿ ದಿನ ವಿಡೀ ದುಡಿದದ್ದು ಯಾರಿಗಾಗಿ?, ಏತಕ್ಕಾಗಿ? ಎನ್ನುವ ಕಠೋರಸತ್ಯ ದೊಡನೆ ಹಾಸಿಗೆಯಲ್ಲಿ ರಾತ್ರಿಯಿಡೀ ಹೊರಳಾಡುತ್ತಾ, ಅಷ್ಟಿಷ್ಟು ನಿದ್ದೆಯ ಸುಖ ಅನುಭವಿಸುತ್ತಿರುವಾಗಲೇ ಮತ್ತೆ ಅದೇ ಸೂರ್ಯನ ಹೊಸ ಹೊಸಬಯಕೆಗಳ ಕಿರಣಗಳು ಮೈಯನ್ನು ಸ್ಪರ್ಷಿಸಿದಾಗ ಮತ್ತದೇ ಯಾಂತ್ರಿಕ ಓಟ!  ಹಾಗಾದರೆ ಇಷ್ಟೇ ಬದುಕೆ?  ಬದುಕೆಂದರೆ ಹೀಗೆಯೇ?  

ನಮಸ್ಕಾರ, ಹಾಯ್ಹಲೋಸರ್, ಒಡೆಯಾ...ಹೀಗೆಲ್ಲಾ ಕರೆಸಿ ಕೊಳ್ಳುವವರಿಗೊಂದು ತನ್ನದೇ ಆದ ಐಡೆಂಟಿಟಿಬೇಡವೇ?  ಸ್ವಂತ ವ್ಯಕ್ತಿತ್ವ ಬೇಡವೇ?  ಸ್ವಾರ್ಥಲೇಪ ವಿಲ್ಲದ ಪ್ರೀತಿ ಬೇಡವೇ?  ತನ್ನ ವ್ಯಕ್ತಿತ್ವವನ್ನು ಗುರುತಿಸುವವರು, ಗೌರವಿಸುವವರು, ಪ್ರೀತಿಸುವವರು ಬೇಡವೇ? ದಿನದ ಮುಕ್ತಾಯದಲ್ಲಿ ಕಾಡುತ್ತಿರುವ ಏಕಾಂಗಿತನವನ್ನು, ಬೇಸರವನ್ನು ತೊಲಗಿಸುವ ನಿಜವಾದ ಜೊತೆಗಾರರು ಬೇಡವೇ? ಅದಕ್ಕೆಂದೇ ಮನೆಬೇಕು.  ಆ ಮನೆ ತುಂಬೆಲ್ಲ ತನ್ನವರಿರಬೇಕು.  ಅವರ ಪ್ರೀತಿ ತುಂಬಿರಬೇಕು.  

ಮನೆಯೊಳಗಿನ ಒಂದಾದ ಬದುಕು ಅದೆಷ್ಟು ಸುಂದರ!  ಕಷ್ಟಸುಖ, ನಗು-ಅಳು, ಸೋಲು-ಗೆಲುವು, ಲಾಭ-ನಷ್ಟ, ಜನನ-ಮರಣಗಳ ಮಿಶ್ರಣ, ಸಂಸಾರ ದೊಳಗಿನ ಸುಮಧುರ ಬಾಂಧವ್ಯ, ದೇವರು-ದಿಂಡರು, ಶಿಸ್ತು-ಸಂಪ್ರದಾಯಗಳ ಪಾಲನೆ, ಬಂಧುಮಿತ್ರರಿಗೆ, ಬೇಡಿ ಬಂದವರಿಗೆ ಸದಾ ತೆರೆದಿರುವ ಮನೆಬಾಗಿಲು-ಮನೆಯನ್ನು ಅತ್ಯಂತ ಸುಭದ್ರ ಸ್ಥಿತಿಯಲ್ಲಿಡುತ್ತದೆ.ಇಂತಹ ಮನೆಯ ಶಾಂತಿಯನ್ನು ಪರೀಕ್ಷಿಸಲು ಬಹುಶ: ಯಾವ ದೇವರು ಪ್ರಯತ್ನ ಪಡಲಾರ!ದಿನ ಬೆಳಗಾದರೆ ಮುಸುಕನ್ನು ಕಿತ್ತೆಸೆದು, ದಿನದ ಕರ್ತವ್ಯವನ್ನು ಜ್ಞಾಪಿಸುವ ಹೆಂಡತಿ, ಪ್ರೀತಿಯಿಂದ ಮೈತಟ್ಟಿ ಮಕ್ಕಳನ್ನು ಎಚ್ಚರಿಸಿ,ದಿನದ ಪ್ರಾರಂಭಕ್ಕೆ ಸುಪ್ರಭಾತ ಹಾಡುವ ತಾಯಿ, ಮನೆಯ ಮುಂದಿನ ಮುದ್ದಿನ ರಂಗೋಲಿ, ಮಕ್ಕಳ ನಿಷ್ಕಪಟ ಪ್ರೀತಿ, ಮಡದಿಯಪ್ರೇಮ, ಪ್ರೀತಿಯ ಗಂಡ ಮಕ್ಕಳು, ಮಕ್ಕಳ ಭವಿಷ್ಯವನ್ನು ರೂಪಿಸುವ ತಂದೆ ತಾಯಿ, ಇಷ್ಟಕ್ಕೇ ಸೀಮಿತಗೊಳ್ಳದ ಮನೆಯವರ ಪ್ರೀತಿ, ಬಂಧು ಬಳಗದ, ಸ್ನೇಹಿತರಿಗೂ ಹರಡಿ, ಹಬ್ಬಹರಿದಿನ, ಮದುವೆ ಮುಂಜಿಗಳಲ್ಲಿ, ಮನೆಯ ಮುಂದಿನ ಚಪ್ಪರದಲ್ಲಿ ಒಟ್ಟಾಗಿ ಕೂತು ಸ್ನೇಹ ಪ್ರೀತಿಯ ಸವಿಯೂಟವನ್ನು ಚಪ್ಪರಿಸಿಸುವುದೇ ಕಣ್ಣಿಗೊಂದು ಹಬ್ಬ!  ಇದಲ್ಲವೇಮನೆ?

ಸೋತು ಸುಣ್ಣವಾದ ಮನಸ್ಸು ಅಲೆದಲೆದು ಮನೆಗೆಬಂದಾಗ,ಮನೆ ನೆರಳನ್ನೀಯುತ್ತದೆ! ಅನಾರೋಗ್ಯದ ದೇಹ ಕಾಳಜಿಯ ಉಪಚಾರ, ವಿಶ್ರಾಂತಿ ಆರೈಕೆಗಳಿಂದ ಚೇತರಿಸಿಕೊಳ್ಳುವುದೂ ಮನೆಯಲ್ಲಿಯೇ. ಸೋಲಿನಿಂದ ಕಂಗೆಟ್ಟು, ಮನೆಯೊಳಗೆ ಕಾಲಿಟ್ಟು ಬಂದಾಗ, ’ಅಷ್ಟೇತಾನೇ, ಇಷ್ಟಕ್ಕೆ ಪ್ರಪಂಚ ಮುಳುಗಿ ಹೋದ ಹಾಗೆ ಮಾಡುವುದು ಯಾಕೆ?  ದೇವರಿದ್ದಾನೆ. ಮುಂದಿನ ಬಾರಿ ಪ್ರಯತ್ನ ಮಾಡಿದರಾಯಿತ್ತಪ್ಪ’, ಮೈದಡವಿ, ಒಂದು ಲೋಟ ನೀರು ಕೊಟ್ಟು, ಸಂತೈಸುವ ನುಡಿಗಳು ಸಿಗುವುದೂ ಮನೆಯಲ್ಲ್ಲಿಯೇ.  ಗೆಲುವು ಸಾಧಿಸಿ ಮನೆಗೆ ಬಂದಾಗ ಸಿಗುವ ಪ್ರಾಮಾಣಿಕ ಹೃದಯಗಳ ಶುಭಾಶಯಗಳು ಇಡೀ ಮನೆಯವರೇ ವಿಜಯ ಸಾಧಿಸಿದಂತ ಹಸಂಭ್ರಮ!  ಈ ಖುಷಿಗೊಂದು ಭರ್ಜರಿ ಭೋಜನ!  ಇವು ಕಾಣಲು ಸಿಗುವುದು ಮನೆಯಲಲ್ಲದೇ ಇನ್ನೆಲ್ಲಿ? ಪವಿತ್ರಪ್ರೇಮ, ಮನುಷ್ಯ ಹೊಸ ಹುಟ್ಟು, ಆರಂಭವಾಗುವುದು ಮನೆಯ ನಾಲ್ಕು ಗೋಡೆಯ ಮಧ್ಯದಲ್ಲೇ.  ಮಣ್ಣಿನ ಮುದ್ದೆಯಂತಹ ಮಗು ನಡೆಯಲು ಕಲಿತು, ಮಾತಾಡಲು ಕಲಿತು, ಮನುಷ್ಯ ಸಂಬಂಧಗಳನ್ನು ಅರ್ಥೈಸಿಕೊಂಡು, ಉನ್ನತ ಆದರ್ಶ ವಿಚಾರಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ರೂಪುಗೊಳ್ಳುವುದೂ ಮನೆಯಲ್ಲಿಯೇ.  ಅದಕ್ಕೆಂದೇ ಟಿ.ಪಿ. ಕೈಲಾಸಂರವರು ಹೇಳಿದ್ದು, “ಮಕ್ಕಳ ಸ್ಕೂಲ್ಮನೇಲಲ್ವೇ?’ ಅತ್ಯಾಧುನಿಕ ಮನೆಯನ್ನು ಕಟ್ಟಲು ಶ್ರಮ ಪಡುವವರು’ಮನೆ ಕಟ್ಟಿ ನೋಡು’ಎಂಬ ಮಾತನ್ನು ನೆನೆದು ಭಯ ಪಡುತ್ತಾರೆಯೇ ಹೊರತು ಮನೆಯೊಳಗಿನ ಬದುಕು ಹೇಗಿರಬೇಕೆಂದು ಯೋಚಿಸುವುದೂ ಇಲ್ಲವೆಂದರೆ ಏನಾಶ್ಚರ್ಯ? ಮುಂಜಾನೆಯಲ್ಲಿಯೇ ಮನೆ ಬಿಟ್ಟು ದುಡಿಯಲು ಹೋಗಿ ಮಧ್ಯರಾತ್ರಿಯಲ್ಲಿ ಮನೆಸೇರುವ ಅಪ್ಪ, ಎಗ್ಗಿಲ್ಲದೆ ಬೆಳೆಯುವ ಮಕ್ಕಳು, ಒಂಟಿತನದಲ್ಲಿ ಬೇಸತ್ತು ಸತ್ವವನ್ನು ಕಳೆದುಕೊಂಡ ಅಮ್ಮ, ಪ್ರೀತಿಯ ಒಡನಾಟವಿಲ್ಲದ ಸಂಬಂಧಗಳು, ಮಾನಸಿಕವಾಗಿ ಸಂಪರ್ಕವನ್ನೇ ಕಡಿದುಕೊಂಡಂತಹ ಕುಟುಂಬ, ಒಂದೇ ಮನೆಯೊಳಗೆ ವಾಸವಿದ್ದರೂ ಒಬ್ಬರಿಗೊಬ್ಬರ ವ್ಯವಹಾರವೇಗೊತ್ತಿಲ್ಲದ ಸಂಸಾರ-ಈ ಸ್ಥಿತಿಯಲ್ಲಿರುವ ಮನೆ ಜನವಾಸವಿಲ್ಲದ ದೆವ್ವದ ಮನೆಯಂತೆ!

ಮೈಮನಸ್ಸು ದಣಿದು ಮನೆಗೆ ಬರುವವರಿಗೆ ಮನೆ ಮಸಣವಾಗಬಾರದು.  ಯಾರದ್ದೋ ದ್ವೇಷ ಸಿಟ್ಟನ್ನು ತೀರಿಸಲು ಮನೆ ಸಾಧನ ವಾಗಬಾರದು.  ಅಂದಂದಿನ ಮನಸ್ತಾಪಗಳು ಸೂರ್ಯನೊಂದಿಗೇ ಅಸ್ತಮಿಸಿ, ಹೊಸದಿನವನ್ನು ಕಾಣುವ ನಂಬಿಕೆ-ನಿರೀಕ್ಷೆ ಮನೆಯೊಳಗೆ ಹೊಮ್ಮಿ ಹರಿಯುತ್ತಿರಬೇಕು.  ಸಂಬಂಧಗಳು ಬರೇ ರಕ್ತಕ್ಕಷ್ಟೇ ಸೀಮಿತವಾಗಿ ಪ್ರೀತಿಯ ಬಂಧವನ್ನು ಕಡಿದುಕೊಂಡು ಊಟಕ್ಕೆ, ವಿರಾಮಕ್ಕೆ, ಆಶ್ರಯಕ್ಕೆ, ಮೋಜಿಗೆ ಮಾತ್ರ ಮನೆಯ ಉಪಯೋಗವಾದರೆ, ಅಂತಹಮನೆ “ಬೋರ್ಡಿಂಗ್ಮತ್ತು ಲಾಡ್ಜಿಂಗ್“ ಆಗಿಬಿಡುತ್ತದೆ.

ತನ್ನ ಬರುವಿಕೆಯನ್ನೇ ಕಾಯುತ್ತಿರುವ ಹೆಂಡತಿ-ಮಕ್ಕಳು, ಮನಸ್ಸಿಗೆ ಆಸರೆ ಆಧಾರವಾಗಿರುವ ಗಂಡ, ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಿರುವ ಕುಟುಂಬ, ರಾತ್ರಿಯ ಸಮಯದಲ್ಲಾದರೂ ಒಂದೇ ಮೇಜಿನ ಸುತ್ತ ಸಂತೋಷದಿಂದ ಊಟ ಮಾಡುತ್ತ ಹರಟುತ್ತಿರುವ ಸಂಸಾರ, ಒಟ್ಟಾಗಿ ಪ್ರಾರ್ಥಿಸುವ ಮನೆಯವರು, ನೆರೆಮನೆಯವರಿಗೆ ಹೊರೆಯಾಗದ ಕುಟುಂಬ – ಇವು ಒಂದು ಸುಂದರ ಮನೆಯ ಒಟ್ಟು ಚಿತ್ರಣವಾಗಬಲ್ಲದು.  ಬಹುಶ: ಇಂತಹ ಅದೃಷ್ಟದ ಮನೆಯನ್ನು ಕೋಟಿ ಕೋಟಿ ಸುರಿದರೂ ಕಟ್ಟಲಾಗದು!
ಕೊನೆಹನಿ:

“ಮೂರ್ಖರು ಮನೆಕಟ್ಟುತ್ತಾರೆ;
ಬುದ್ಧಿವಂತರು ಅದರಲ್ಲಿ ವಾಸಿಸುತ್ತಾರೆ”.

ವೈಲೆಟ್ ಪಿಂಟೋ, ಕನ್ನಡ ಉಪನ್ಯಾಸಕಿ
ಸೈಂಟ್ ಮೇರಿಸ್ ಪಿಯುಕಾಲೇಜು, ಅರಸೀಕೆರೆ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]