ಬದುಕು ಅವಕಾಶಗಳ ಸಂತೆ ! ಇಲ್ಲಿ ಅವಕಾಶಗಳನ್ನು ಕೊಡುವ, ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ ನಿರಂತರ ! ಅವಕಾಶಗಳು ಲಭಿಸುವುದು ಅದೃಷ್ಠದಿಂದ ಎಂದಾದರೆ, ಅದು ಅಪರೂಪ! ಅವಕಾಶಗಳು ಅದೃಷ್ಠದ ಮೇಲೇಯೇ ಅವಲಂಬಿತವಾದರೆ, ಕೈಗೆ ಸಿಕ್ಕ ಅವಕಾಶಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ! ಸ್ವಂತ ಪರಿಶ್ರಮದಿಂದ, ಸಾಧನೆಯಿಂದ ಗಳಿಸಿಕೊಂಡ ಅವಕಾಶಗಳು ಒಳ್ಳೆಯ ಫಲವನ್ನು ನೀಡುತ್ತವೆ. ಅವಕಾಶಗಳು ನಮ್ಮನ್ನು ಕಾದು ಕುಳಿತಿರುವುದಿಲ್ಲ. ಉದಾಸೀನತೆ, ಸೋಮಾರಿತನ, ನಿರಾಸೆ..ಇವು ಹೊನ್ನ ಅವಕಾಶಗಳ ಬದ್ಧ ವೈರಿಗಳು ! ಕೆಲವೊಂದು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ಬರುವುದರಿಂದ, ಅತ್ಯಂತ ಜಾಣ್ಮೆ ಬುದ್ಧಿವಂತಿಕೆಯಿಂದ ಅವುಗಳನ್ನುಒಲಿಸಿಕೊಳ್ಳಬೇಕು ! ಏಕೆಂದರೆ ಅವು ಇನ್ನೊಮ್ಮೆ ನಮ್ಮ ಬದುಕಿನ ಕದವನ್ನು ತಟ್ಟಲಾರವು !

ವಿದ್ಯಾಭ್ಯಾಸದ ದೆಸೆಯಲ್ಲಿ ಕೈ ತುಂಬಾ ಸಿಕ್ಕ ಅವಕಾಶ ಸಮಯ ಸಂದರ್ಭಗಳನ್ನು ಸದ್ವಿನಿಯೋಗಪಡಿಸಿಕೊಂಡರೆ, ಅಂದುಕೊಂಡದ್ದನ್ನು ಸಾಧಿಸಿ, ಬದುಕಿನ ಸೌಧವನ್ನು ಸುಂದರವಾಗಿ ಕಟ್ಟಬಹುದು. ವಿದ್ಯಾರ್ಥಿ ಬದುಕನ್ನು ಮೋಜು ಮಜಾ, ಕೆಟ್ಟ ಸಂಗದಲ್ಲಿ ಕಳೆ ದರೆ, ಮುಂದಿನ ಬದುಕು ಅತ್ಯಂತ ದುರ್ಭರವಾಗುತ್ತದೆ! ಜೀವನ ಕೆಟ್ಟು ಹೋಗಿ ಅದರ ಫಲವನ್ನು ಬದುಕಿನುದ್ದಕ್ಕೂ ಅನುಭವಿಸಬೇಕಾಗುತ್ತದೆ. ಮುಂದೆ ಚಿಂತಿಸಿ ಏನೇನೂ ಫಲವಿಲ್ಲ! ವಿದ್ಯಾರ್ಥಿ ಬದುಕು ಲಭಿಸುವುದು ಒಂದೇ ಒಂದು ಬಾರಿ ! ಅದನ್ನು ಮನ:ಪೂರ್ತಿ ಅನುಭವಿಸಬೇಕು.

ಯೌವನ ಬದುಕಿನ ವಸಂತ ಕಾಲ ! ಅದಮ್ಯ ಶಕ್ತಿ ಉತ್ಸಾಹ ಕನಸುಗಳ ಕಣಜ! ಅವಕಾಶಗಳ ಆಗರ! ಅಷ್ಟೇ ಆಮಿಷಗಳು, ಸಾಮಾಜಿಕ ಜಾಲತಾಣಗಳು, ಮಿಡಿಯಾಗಳ ಹಾವಳಿಗಳು, ಕೆಟ್ಟ ಸಂಗಾತಿಗಳು, ದುರ್ವ್ಯಸನಗಳು ಕೈ ಬೀಸಿ ಕರೆಯುವ ಕಾಲವೂ ಕೂಡ ! ಬದುಕಿನ ಬಂಡಿಯ ಪಯಣಕ್ಕೆ ಜೋಡಿ ಬೇಡುವ ಕಾಲ! ಸುಲಭವಾಗಿ ಜಾರಿ ಬೀಳುವ ಕಾಲ! ಇಂತಹ ಸಮಯದಲ್ಲಿ ಬಂಗಾರದಂತಹ ಅವಕಾಶಗಳು ಸನಿಹದಲ್ಲೇ ಸುಳಿದಾಡಿದರೂ, ಯಾವುದೋ ಗುಂಗಿನಲ್ಲೋ, ಮತ್ಯಾವುದೋ ಮತ್ತಿನಲ್ಲೋ ಸಮಯ ಜಾರಿ ಅವಕಾಶಗಳು ಹಾರಿ ಹೋಗಬಹುದು !

ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡಲು ನೀಡುವ ಒಂದೇ ಒಂದು ಅವಕಾಶವು ಮನುಷ್ಯನ ಚರಿತ್ರೆಯನ್ನೇ ಬದಲಿಸಬಹುದು! ತಿದ್ದಲು ಅವಕಾಶ ನೀಡುವುದರಿಂದ ವ್ಯಕ್ತಿಯ ವಿಕಸನಕ್ಕೆ ನೀರೆರೆದಂತಾಗುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದು ಹೋದ ತಪ್ಪುಗಳನ್ನು ತಿದ್ದುವುದಕ್ಕೆ ಅವಕಾಶ ಕೊಟ್ಟಾಗ, ಕೌಟುಂಬಿಕ ಕಲಹಗಳು ಶಮನಗೊಳ್ಳುವುವು! ಮುದುಡಿದ ಪತಿ-ಪತ್ನಿಯರ ಸಂಬಂಧಗಳು ಮತ್ತೆ ಅರಳಬಹುದು! ಮುರಿದ ಸ್ನೇಹ ಸೇತುವೆಗಳು ಒಂದಾಗಬಹುದು! ತಪ್ಪಿಗೆ ಶಿಕ್ಷೆಯೇ ಪರಿಹಾರವಲ್ಲ! ಸರಿಪಡಿಸಿಕೊಳ್ಳುವ ಅವಕಾಶವು ಕೂಡ ಪರಿಹಾರವೇ !

ಅವಕಾಶಗಳ ಆಕಾಶದಲ್ಲಿ ಎಷ್ಟೋ ತಪ್ಪು ಅಭಿಪ್ರಾಯಗಳು ತಿಳಿಗೊಳ್ಳಬಹುದು! ಆತುರದಲ್ಲಿ ಕೈಗೊಂಡ ತೀರ್ಮಾನಗಳು ಸಮಂಜಸವಲ್ಲ ಎನಿಸಬಹುದು! ಕೋಪ ದ್ವೇಷಗಳಿಂದ ಕುದಿವ ಮನಸ್ಸು ಶಾಂತಗೊಂಡು, ಕ್ಷಮೆ ಬೇಡಲು, ಕ್ಷಮೆ ನೀಡಲು ಧಾವಿಸಬಹುದು!
ಅವಕಾಶಗಳ ಆಗಸ ತೆರೆದುಕೊಂಡಾಗ ಎಲ್ಲೆಡೆ ಬೆಳಕು, ಸತ್ಯ , ಸಮೃದ್ಧಿಯ ದರ್ಶನ !

 

 

 

 

 

 

 

 

 

ವೈಲೆಟ್ ಪಿಂಟೋ, ಕನ್ನಡ ಉಪನ್ಯಾಸಕಿ
ಸೈಂಟ್ ಮೇರಿಸ್ ಪಿಯು ಕಾಲೇಜು, ಅರಸೀಕೆರೆ