Jan 02: ವರ್ಷದ ಆರಂಭಕ್ಕೆ ಸಂಭ್ರಮದ ಮುನ್ನುಡಿ ಬರೆದಂತೆ, ಬರುವುದೇ ಕ್ರಿಸಮಸ್ ಹಬ್ಬ.  ನಮಗೆಲ್ಲರಿಗೂ ಸಡಗರದ ದಿನ. 2020-21 ನೇ ಸಾಲಿನ ಕೊರೋನಾ ಭೀತಿಯಲ್ಲಿ ಅತ್ಯಂತ ಸರಳತೆಯಲ್ಲಿಯೇ ಸಂಭ್ರಮದಿಂದ ಚಿತ್ತಾಪೂರದ ಬೆಥನಿ ಪ್ರೌಢ ಶಾಲೆ ಹಾಗೂ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರೆಲ್ಲರೂ ಕೂಡಿ ಕ್ರಿಸ್‍ಮಸ್ ದಿನವನ್ನು ಆಚರಿಸಿದೆವು. ಮೊಟ್ಟ ಮೊದಲಿಗೆ ದೇವರ ಸೇವಕ  ಆರ್. ಎಫ್. ಸಿ ಮಸ್ಕರೇನಸ್‍ರವರು ದೈವಾಧೀನರಾದ 60ನೇ ವರ್ಷದ ದಿನವನ್ನು ಸ್ಮರಿಸಿ  ಅವರಿಗೆ ಬೇಗ ಸಂತರ ಪದವಿ ಲಭಿಸಲೆಂದು ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಅತಿ ಅವಶ್ಯಕವೆಂಬುದನ್ನು ಕ್ರಿಯಾತ್ಮಕವಾಗಿ ನಿರೂಪಿಸಿ ಪ್ರಾರ್ಥನಾ ಕೂಟವನ್ನು ನೆರವೇರಿಸಲಾಯಿತು. ಶಿಕ್ಷಕರಲೊಬ್ಬರು ಸಾಂತಾಕ್ಲಾಸ್‍ರವರ ವೇಷ ಧರಿಸಿ ಸೃಜನಾತ್ಮಕವಾಗಿ,  ಅತಿಥಿ ಗಣ್ಯರನ್ನು ಹಾಗೂ ಎಲ್ಲ ಶಿಕ್ಷಕರನ್ನು ಸ್ವಾಗತಿಸಿದರು.

ಬೆಥನಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಿ.ಕವಿತಾ ರವರು ದೇವರ ಸೇವಕ ಆರ್. ಎಫ್. ಸಿ ಮಸ್ಕರೇನಸ್‍ರವರ ಜೀವನ ಮೌಲ್ಯಗಳನ್ನು ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಸಿ.ಲೂಸಿ ಪ್ರೀಯಾ ಅವರು ಕ್ರಿಸ್‍ಮಸ್ ಹಬ್ಬದ ವಿಶೇಷತೆ ಹಾಗೂ ಫಾದರ್ ರೈಮಂಡ್ ಮಸ್ಕರನೇಸ್ಸ್‍ರವರ ಸ್ವರ್ಗದಲ್ಲಿನ ಹುಟ್ಟು ಹಬ್ಬದ (ದೈವಾಧಿನರಾದ ದಿನದ) ಬಗ್ಗೆ ಹೇಳಿರುವ ಮಾತುಗಳು ಕಾರ್ಯಕ್ರವiಕ್ಕೆ ಶಿರೋಮಣಿಗಳಂತಿದ್ದವು. ಕವನಗಳ ಮೂಲಕ ವಂದನಾರ್ಪಣೆಯನ್ನು ನಡೆಸಿ ಕೊಟ್ಟು, ಎಲ್ಲರೂ ಸಿಹಿಯನ್ನು ಹಂಚಿಕೊಳ್ಳುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.