Jan 07: “ಎಲ್ಲರಿಗೂ ಒಳಿತನ್ನು ಬಯಸು, ಶತ್ರುಗಳನ್ನು ಕ್ಷಮಿಸು, ಸರ್ವರನ್ನು ಪ್ರೀತಿಸು ಎಂಬ ಸಂದೇಶವನ್ನು ಹೊತ್ತು, ಸರಳ ತತ್ವದ ಮೂಲಕ ಜೀವನ ಮೌಲ್ಯ ಸಾರಿದ ಶಾಂತಿದೂತರು ಪ್ರಭು ಕ್ರಿಸ್ತರು. ‘ಸ್ನೇಹ ಸಹಬಾಳ್ವೆಯೇ ಬದುಕಿನ ಉಸಿರು’, ಎಂದು ದಾರಿ ತೋರಿದ ದೇವರು ಇವರು. ಜಗತ್ತಿನ ಉದ್ಧಾರಕ್ಕೆ ಮನುಷ್ಯರಿಗೆ ಮಾನವೀಯತೆಯ ಹಾದಿಯಲ್ಲಿ ಜೀವಿಸಲು ಸರ್ವಶಕ್ತನಾದ ಭಗವಂತನು ಸಾಮಾನ್ಯ ಮಾನವರಾಗಿ ಧರೆಗಿಳಿದು ದನದ ಕೊಟ್ಟಿಗೆಯಲ್ಲಿ ಜನ್ಮತಾಳಿ ಬಂದ ಸಂಭ್ರಮಾಚರಣೆಯೇ ಕ್ರಿಸ್ಮಸ್”. ಇಂತಹ ಮಲ್ಲಿಗೆ ಮನಸ್ಸಿನ ಮಮತೆಯ ಹಬ್ಬ ಕ್ರಿಸ್ಮಸ್ ಕಾರ್ಯಕ್ರಮವನ್ನು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.23.12.2020 ರಂದು ಅತ್ಯಂತ ಅಭಿಮಾನದಿಂದ ಆಚರಿಸಲಾಯಿತು. ಅಂತೆಯೇ ಬೆಥನಿ ಸಂಸ್ಥೆಯ ಸಂಸ್ಥಾಪಕರಾದ ವಂದನೀಯ ಗುರುಗಳಾದ ದೇವರ ಸೇವಕ ಆರ್.ಎಫ್.ಸಿ.ಮಸ್ಕರೇನಸ್ ರವರ 60ನೇ ಪುಣ್ಯಸ್ಮರಣೆಯ ಪ್ರಯುಕ್ತ ಪುಷ್ಪನಮನ ಸಲ್ಲಿಸಲಾಯಿತು.


ಈ ಶುಭಗಳಿಗೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಆಗಮಿಸಿ, ಕ್ರಿಸ್ಮಸ್ ಸಂದೇಶ ನೀಡುತ್ತಾ ಮಾತನಾಡಿದ ವಂದನೀಯ ಭಗಿನಿ ಲೂಸಿ ಪ್ರೀಯಾ; ಕ್ರಿಸ್ಮಸ್ ಹಬ್ಬದ ಸಂಭ್ರಮದ ಕಥೆಯನ್ನು ಮೆಲುಕಾಡುವ ಸನ್ನಿವೇಶವನ್ನು ನಿರ್ಮಿಸಿದರು. “ಅಶಾಂತಿ, ಅಸಮಾಧಾನ ಹಾಗೂ ಕ್ರೌರ್ಯ ತುಂಬಿದ ಮಾನವರಲ್ಲಿ ತಾಯ್ತನದ ಹೆಂಗರುಳನ್ನು ಕಸಿಮಾಡಿದ ಸವಿವರದ ಕಥೆಯ ಸಂಭ್ರಮದ ನೆನಪೇ ಕ್ರಿಸ್ಮಸ್. ದೇವರು ಸರಳ ಹಾಗೂ ಸಜ್ಜನಿಕೆಯ ರೂವಾರಿಯಾಗಿದ್ದಾರೆ. ನಮ್ಮ ಜೀವನದಲ್ಲಿ ನಾವು ಕೂಡಾ ಪ್ರೀತಿ, ಶಾಂತಿ ಹಂಚುತ್ತಾ ಸೌಹಾರ್ದತೆಯಿಂದ ಬಾಳಲು ಕರೆ ನೀಡಿ ಜಗತ್ತಿನ ಶಾಂತಿಗಾಗಿ ಪ್ರಾರ್ಥಿಸಿದರು”.


ಇಂತಹ ಸುಸಂದರ್ಭವನ್ನು ಒದಗಿಸಿ ಕ್ರಿಸ್ಮಸ್ ಹಬ್ಬದ ಆಂತರ್ಯದಲ್ಲಿರುವ ಮೌಲ್ಯದ ವ್ಯಾಪ್ತಿ ಆಗಸಕ್ಕಿಂತಲೂ ಎತ್ತರ, ಭೂಮಿಗಿಂತಲೂ ಆಳ ಎಂದು ನಮ್ಮ ಬದುಕಿಗೆ ದಾರಿದೀಪವಾದಂತಹ ಕಾರ್ಯಕ್ರಮವನ್ನು ಆಯೋಜಿಸಿದ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಭಗಿನಿ ಅವೆಲಿನ್ ಹಾಗೂ ಬೆಥನಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಭಗಿನಿ ಕವಿತಾರವರಿಗೆ ಹೃತ್ಪೂರ್ವಕ ವಂದನೆಗಳು.

ಕುಮಾರಿ. ಸವಿತಾ  ಹಾಗೂ  ಶ್ರೀಮತಿ ರಾಜೆಶ್ವರಿ, ಸಹಶಿಕ್ಷಕಿ
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪೂರ