Jan 06: ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗ ಮತ್ತು ಮಕ್ಕಳೆಲ್ಲರೂ ಒಟ್ಟುಗೂಡಿ ಅತೀ ವಿಜೃಂಭಣೆಯಿಂದ ದಿ.23/12/2021ರ ಗುರುವಾರದಂದು ಕ್ರಿಸ್ತ ಜಯಂತಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನಾ ಕೂಟದೊಂದಿಗೆ, ಫಾದರ ಫೌಂಡರ ಆರ್.ಎಫ್.ಸಿ ಮಸ್ಕರೆನಸ್‍ರವರ 61ನೇ ಪುಣ್ಯಸ್ಮರಣೆಯ ಆಚರಣೆ ಮಾಡಿ ಅವರ ಭಾವ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡುವುದರೊಂದಿಗೆ ಪ್ರಾರಂಭ ಮಾಡಿ ಕ್ರಿಸ್ತ ಕಿರಣ ಎಂಬ ಕ್ರಿಸ್ತ ಜಯಂತಿ ನಾಟಕ, ನೃತ್ಯದೊಂದಿಗೆ ಮುಂದುವರೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ಪ್ರಭಾರಿ ಮುಖ್ಯಸ್ಥೆ ಸಹೋದರಿ ಗಿರಿಜಾ ಅವರು ‘ಕ್ರೈಸ್ತ ಶಾಲೆಗಳಲ್ಲಿನ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಬಿತ್ತಲಾಗುತ್ತದೆ. ಇಲ್ಲಿ ಕಲಿತಿರುವ ಮಕ್ಕಳಿಂದ ಮುಂದೆ ಸಮಾಜದಲ್ಲಿ ಯಾವುದೇ ಕೆಟ್ಟ ಚಟುವಟಿಕೆಗಳು ನಡೆಯುವುದಿಲ್ಲ. ಅಲ್ಲದೇ ಎಲ್ಲ ಧರ್ಮಗ್ರಂಥಗಳು ಬೇರೆ ಬೇರೆಯಾಗಿದ್ದರೂ ಅವುಗಳಲ್ಲಿ ಹೇಳಿರುವ ವಿಷಯ ಒಂದೇ ಆಗಿದೆ’ ಎನ್ನುತ್ತ ತಾವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತಮ್ಮ ಪುಣ್ಯ ಎಂದು ಹೆಮ್ಮೆ ಪಟ್ಟರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೌಲಾನಾ ಮುಫ್ತಿ ಮಹ್ಮದ್ ಯಾಸೀನ ಬಕ್ವಿಯವರು ನಾನು ಇಂದಿನ ಈ ಸರ್ವಧರ್ಮ ಸಮನ್ವಯವನ್ನು ಸಾರುವ ಅದ್ಬುತ ಕಾರ್ಯಕ್ರಮವನ್ನು ನನ್ನ ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಎದೆತಟ್ಟಿ ಹೇಳಿಕೊಂಡಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನುಂಟು ಮಾಡಿತು.

ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಜ್ಯೋತಿ ಸೇವಾ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಭಗಿನಿ ಲೂಸಿ ಪ್ರೀಯಾ ಅವರು ದೇವರು ಇರುವುದು ನಮ್ಮ ಪ್ರೀತಿ, ಸ್ನೇಹ ಕರುಣೆಗಳಲ್ಲಿ ಮಾತ್ರ. ಅದಕ್ಕಾಗಿ ನಾವು ಬೇರೆಯವರೊಂದಿಗೆ ಸದಾ ಪ್ರೀತಿ, ಸ್ನೇಹದಿಂದ ವರ್ತಿಸಬೇಕು ಎಂಬ ಕಿವಿ ಮಾತನ್ನು ಹೇಳುತ್ತ ಕ್ರಿಸ್ತ ಜಯಂತಿಯ ಸಂದೇಶವನ್ನು ನೆರೆದಿರುವ ಎಲ್ಲ ಮಕ್ಕಳು, ಶಿಕ್ಷಕರು ಮತ್ತು ಪೋಷಕರಲ್ಲಿ ಬಿತ್ತಿದರು.

ಕಾರ್ಯಕ್ರಮವು ಕ್ರಿಸ್ಮಸ್ ಹಾಡುಗಳು, ವಿವಿಧ ರೀತಿಯ ನೃತ್ಯಗಳೊಂದಿಗೆ ಸಿ.ಕವಿತಾ ಮುಖ್ಯೋಪಾಧ್ಯಾರು ಬೆಥನಿ ಪ್ರೌಢ ಶಾಲೆ ಹಾಗೂ ಸಿ.ಅವೆಲಿನ್ ಮುಖ್ಯೋಪಾಧ್ಯಾರು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಇವರಿರ್ವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನೆರವೆರಿತು.

ಕೊನೆಗೆ ಎಲ್ಲ ಮಕ್ಕಳಿಗೂ, ಸಿಬ್ಬಂದಿವರ್ಗದವರಿಗೂ ಕೇಕ್ ಹಂಚಲಾಯಿತು.

 

 

 

 

 

 

 

 

 

ಶ್ರೀಮತಿ ಅರ್ಚನಾ ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ