March 13: ಲಕ್ಷಾಂತರ ಬಾಳಿನ ಭಾವಗೀತೆಗೆ ಮುನ್ನುಡಿ ಬರೆದ ಚಿತ್ತಾಪೂರಿನ ವಿದ್ಯಾರಾಣಿ ಹಾಗೂ ಶಿಶುವಿಹಾರ ಶಾಲೆಯ ಸುವರ್ಣ ಮಹೋತ್ಸವಕ್ಕೆ ವಿಜೃಂಭಣೆಯ ಮಹಾಪೂರವೇ ಹರಿದು ಬಂದಿತ್ತು. ದಿವ್ಯ ಬಲಿ ಪೂಜೆಯಿಂದ ಪ್ರಾರಂಭವಾದ ಕಾರ್ಯಕ್ರಮ ಐದು ದಶಕಗಳುದ್ದಕ್ಕೂ ದೇವರು ಸುರಿಸಿದ ಅದ್ಭುತ ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಿದ ಕ್ಷಣವಾಗಿತ್ತು. ದಿನಾಂಕ 28.02.2023 ಮಂಗಳವಾರ ಶಿಶುವಿಹಾರ ಶಾಲಾ ಮೈದಾನವು ಅರಮನೆಯ ಆವರಣದಂತೆ ಸಿಂಗಾರ ವಾಗಿದ್ದು, ಅತಿಥಿಗಳನ್ನು ವೈಭವಯುತ ಕುಂಭಮೇಳ ನೃತ್ಯದ ಮೂಲಕ ವೇದಿಕೆಗೆ ಆಹ್ವಾನಿಸಲಾಯಿತು. ದೈವ ಭಕ್ತಿಯ ಪ್ರೇರಕವಾದ ಪ್ರಾರ್ಥನಾ ನೃತ್ಯ ಸಭಿಕರಲ್ಲಿ ದೈವಾನುಭವವನ್ನು ಸೃಷ್ಟಿಸಿತು. ಸಂಭ್ರಮದ ಸ್ವಾಗತ ನೃತ್ಯ ಸರ್ವರ ಮನಸ್ಸನ್ನು ಸೆಳೆಯಿತು. ರಾಜೇಶ್ರೀ ಕೆ.ಅಲ್ಲೂರ ರವರ ಸ್ವಾಗತ ನುಡಿಗಳು ಗೌರವದ ಪನ್ನೀರು ಚೆಲ್ಲಿದಂತಿದ್ದವು. ಪುಸ್ತಕದ ಪುಟದೊಳಗೆ ಸ್ಪುಟವಾಗಿ ಬರೆಸಿ, ಮನದೊಳಗೆ ಜ್ಞಾನ ದೀವಿಗೆಯ ಬೆಳಗಿಸಿ, 50 ವರ್ಷಗಳ ಬೋಧನೆಯ ಮೂಲಕ ವಿದ್ಯಾರಾಣಿ ಹಾಗೂ ಶಿಶುವಿಹಾರ ಶಾಲೆಯ ಸಾಧನೆಯ ಹಾದಿಗೆ ದಾರಿದೀಪವಾಗಿ ಸೇವೆ ಸಲ್ಲಿಸಿದ ವಿದ್ಯಾ ರಾಣಿ ಕಾನ್ವೆಂಟಿನ ಮುಖ್ಯಸ್ಥರಿಗೆ, ಶಿಶುವಿಹಾರ ಶಾಲೆಯ ಮುಖ್ಯಗುರುಗಳಿಗೆ, ಶಿಕ್ಷಕ ವೃಂದದವರಿಗೆ ಸನ್ಮಾನಿಸಿದ ಕೃತಜ್ಞತಾ ಭಾವ ಸಂಭ್ರಮಕ್ಕೆ ಕಳೆ ತುಂಬಿತು. ಕಿರು ಪುಷ್ಪ ಭಗಿನಿಯರ ಅಂಗಸಂಸ್ಥೆಯಾಗಿ 1972 ರಲ್ಲಿ ಚಿತ್ತಾಪೂರಕ್ಕೆ ಆಗಮಿಸಿದ ವಿದ್ಯಾರಾಣಿ ಕಾನ್ವೆಂಟ್ ಹಾಗೂ ಅದರ ಅಂಗಸಂಸ್ಥೆಯಾದ ಶಿಶುವಿಹಾರ ಶಾಲೆಯಲ್ಲಿ ಬೆಥನಿ ಸಂಸ್ಥೆಯ ಮೂಲಕ ಅಳವಡಿಸಿಕೊಂಡಿರುವ ಕೇಂದ್ರೀಯ ಮೌಲ್ಯಗಳ ದೃಶ್ಯ ರೂಪಕದ ಅನಾವರಣ ಪ್ರತಿಯೊಬ್ಬರ ಜೀವನದ ಮೌಲ್ಯದ ಮೇಲೆ ಬೆಳಕು ಚೆಲ್ಲಿದಂತಿತ್ತು.ವಿದ್ಯಾ ರಾಣಿ ಕಾನ್ವೆಂಟಿನ ಮುಖ್ಯಸ್ಥರು ಹಾಗೂ ಶಿಶುವಿಹಾರ ಆಂಗ್ಲ ಮಾಧ್ಯಮದ ಮುಖ್ಯ ಗುರುಗಳಾದ ಭಗಿನಿ ಅವೇಲಿನ್ ರವರು ಸ್ವತಃ ರಾಗದೊಂದಿಗೆ ರಚಿಸಿದ ಶುಭಾಶಯ ಗೀತೆ ಸರ್ವರ ಮನಸ್ಸನ್ನು ಸೆಳೆದದ್ದು ವಿಶೇಷ.

ಬೆಥನಿ ಶಿಕ್ಷಣ ಸಂಸ್ಥೆಯ ಪಶ್ಚಿಮ ವಲಯದ ಪ್ರಾಂತ್ಯಾಧಿಕಾರಿಗಳಾದ ಭಗಿನಿ ಸ್ಯಾಲಿಯವರ ನುಡಿಗಳು ಬೆಳಕಿನ ಬೆಳ್ಳಿಯ ಕಿರಣಗಳಂತಿದ್ದವು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ಧವೀರಯ್ಯ ರುದ್ನೂರ ಹಾಗೂ ಶಿಶುವಿಹಾರ ಶಾಲೆಯ ಪ್ರತಿಭೆಗಳಾದ ಹುಬ್ಬಳ್ಳಿ ಧಾರವಾಡ ಉತ್ತರ ವಲಯದ ಸಹಾಯಕ ಪೆÇಲೀಸ್ ಆಯುಕ್ತರಾದ ಡಾಕ್ಟರ್ ವಿನೋದ್ ಮುಕ್ತೆದಾರ, ಯಾದಗಿರಿ ಜಿಲ್ಲೆಯ ಚುನಾವಣಾ ತಹಸಿಲ್ದಾರರಾದ ಶ್ರೀಮತಿ ಸಂತೋಷ ರಾಣಿ ಎಂ ರವರ ನುಡಿಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚೈತನ್ಯ,, ಶಿಕ್ಷಕರಿಗೆ ಕೃತಜ್ಞತಾ ಭಾವವನ್ನು ಮೂಡಿಸಿದವು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ, ಸರ್ವರಿಗೂ ಆಶೀರ್ವದಿಸಿ ಮಾತನಾಡಿದ, ಗುಲ್ಬರ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಪೂಜ್ಯ ಬಿಷಪ್ ಡಾಕ್ಟರ್ ರಾಬರ್ಟ್ ಮೈಕಲ್ ಮಿರಾಂದಾರವರ ನುಡಿಗಳು ಕಾರ್ಯಕ್ರಮಕ್ಕೆ ನೀಡಿದ ಪಾರಿತೋಷಕಗಳಂತೆ ಕಂಗೊಳಿಸಿದವು. ಭವ್ಯ ಭಾರತದ ಸಂಸ್ಕøತಿಯ ಅನಾವರಣಗೊಳಿಸಿ, ವೈವಿಧ್ಯತೆಯಲ್ಲಿ ಏಕತೆ ಸಾರಿದ ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುವ ನೃತ್ಯ, ಸರ್ವರನ್ನು ಆಕರ್ಷಿಸಿದ್ದು ಸಂತಸದ ವಿಷಯ. ಸನ್ಮಾನ ಸ್ವೀಕರಿಸಿದ ಸನ್ಮಾನಿತರು, ಯಾಜಕ ವರ್ಗ, ಇತರ ಕನ್ಯಾ ಮಠಗಳಿಂದ ಆಗಮಿಸಿದ ಭಗಿನಿಯರು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಕಾರ್ಯಕ್ರಮದ ಕುರಿತು ಪೆÇೀಷಕ ಹಾಗೂ ಪ್ರೇಕ್ಷಕರ ಭಾವನೆ ಬೆಥನಿ ಭಗಿನಿಯರ ಸೇವೆಗೆ ಕೃತಜ್ಞತಾ ಭಾವವನ್ನು ಸಲ್ಲಿಸಿದ ಘಳಿಗೆ ಅವೀಸ್ಮರಣೆಯವಾಗಿತ್ತು. ನವೋಲ್ಲಾಸದ ನವೀಕರಣಕ್ಕೆ ನವ್ಯ ನುಡಿ ನಮನ ಸಲ್ಲಿಸಿದ ಕಾರ್ಯಕ್ರಮ ವಿದ್ಯಾರಾಣಿ ಕಾನ್ವೆಂಟಿನ ಬೆಥನಿಕನ್ಯಾ ಭಗಿನಿಯರ, ಶಿಶುವಿಹಾರ ಶಾಲೆಯ ವಿದ್ಯಾರ್ಥಿ ಹಾಗೂ ಸಿಬ್ಬಂದಿ ವರ್ಗದವರ ಸಾರ್ಥಕತೆಯ ಸಂಭ್ರಮವಾಗಿ ಹೊರಹಮ್ಮಿದೆ. ಶ್ರೀಮತಿ ರಾಜೇಶ್ರೀ. ಕೆ. ಅಲ್ಲೂರ, ಸಹ ಶಿಕ್ಷಕರು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪೂರ.

 

 

 

 

 

 

 

 

 

 

 

 

 

 

 

ಶ್ರೀಮತಿ ರಾಜೇಶ್ರೀ. ಕೆ. ಅಲ್ಲೂರ, ಸಹ ಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪೂರ