March 24: ಅರಳುವ ಜೀವನಕ್ಕೆ ಮುನ್ನಡೆಯಾಗಿ, ಬಾಳಿನ ಭಾವಗೀತೆಗೆ ಪ್ರೇರಣೆಯಾಗಿ, ನಮ್ಮ ಉಜ್ವಲ ಭವಿಷ್ಯದ ಜ್ಯೋತಿಯಾಗಿ ಕಂಗೊಳಿಸಿದ, ಈ ಬೀಳ್ಕೊಡುಗೆ ಕಾರ್ಯಕ್ರಮ ನಿಜವಾಗಿಯೂ ಸುಖ ದುಃಖಗಳ ಸಮ್ಮಿಲನ ಕಾರ್ಯಕ್ರಮವಾಗಿತ್ತು. ಪ್ರತಿಯೊಂದು ವಿದ್ಯಾರ್ಥಿಯ ಬಾಳಿನ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ಈ ನೆನಪಿನ ದಿನ ಹೃದಯದ ಯಾವುದೋ ಮೂಲೆಯಲ್ಲಿ ಸಂತೋಷದ ಒಂದು ತುಣುಕು ಆವರಿಸಿದರೆ, ಹೃದಯದ ತುಂಬಾ ಈ ಶಾಲೆಯನ್ನು ಅಗಲಿ ಹೋಗುತ್ತಿರುವ ಸಂಕಟ ಹೆಚ್ಚಾಗುತ್ತಿತ್ತು. ನಾವು ಆಟದ ಜೊತೆಗೆ ಜೀವನ ಪಾಠ ಕಲಿತ ಈ ಶಾಲೆಯನ್ನು ತೊರೆದು ಹೋಗುವ ಮನಸ್ಸಿಲ್ಲದಿದ್ದರೂ ನಮ್ಮ ಉಜ್ವಲ ಭವಿಷ್ಯಕ್ಕೆ ನಾವು ಮುಂದಿನ ಹೆಜ್ಜೆಯನ್ನು ತುಳಿಯಲೇಬೇಕಾಗಿದೆ. ನಮ್ಮ ಮುಂದಿನ ಜೀವನಕ್ಕೆ ಬೆಳಕಾದ ಈ ಶಾಲೆಯ ಕುರಿತು ಈ ಬರವಣಿಗೆಯನ್ನು ಬರೆಯುತ್ತಿರುವುದು ನನಗೆ ಅತ್ಯಂತ ಸಂತೋಷವನ್ನು ನೀಡಿದೆ.

ಭಾರತದ ಸಂಸ್ಕøತಿಯಲ್ಲಿ ಆಥಿತ್ಯ ಮತ್ತು ಬೀಳ್ಕೊಡುಗೆ ಅತ್ಯಂತ ಮಹತ್ವದ ಪಾತ್ರವನ್ನು ಹೊಂದಿದೆ. ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದ ಪದ್ಧತಿಯಂತೆ, ದಿನಾಂಕ 18.03.2023 ರಂದು ಚಿತ್ತಾಪೂರಿನ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲಾ ಹಿತೈಷಿಗಳಾದ ಶ್ರೀಯುತ ರವಿ ಸಜ್ಜನ್ ಶೆಟ್ಟಿ ಹಾಗೂ ಶಾಲಾ ಸಂಚಾಲಕರಾದ ಭಗಿನಿ ಸಿಂತಿಯಾ ಸಿಕ್ವೇರ್ ರವರು ಭಾಗಿಯಾಗಿದ್ದರು. ಮಕ್ಕಳ ಅನಿಸಿಕೆ, ಶಾಲೆಯ ಕುರಿತು ಅಭಿಮಾನ ವ್ಯಕ್ತಪಡಿಸಿದ ಮಾತುಗಳನ್ನು ಕೇಳಿ ಮೌಲ್ಯದ ಜೀವನಕ್ಕೆ ಮಕ್ಕಳು ಅಣಿಯಾಗುವುದನ್ನು ಕಂಡು ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿತು. ಕೆಟ್ಟದ್ದನ್ನು ಮರಳಿನಲ್ಲಿ ಬರೆಯಿರಿ ಒಳ್ಳೆಯದನ್ನು ಬಂಡೆಗಲ್ಲಿನ ಮೇಲೆ ಬರೆಯಿರಿ ಎಂಬ ಮಾತಿನಿಂದ ಕೆಟ್ಟದ್ದು ಅಳಿಸಿ ಒಳ್ಳೆಯದು ಶಾಶ್ವತವಾಗಿ ನೆನಪಿಡಬೇಕೆಂಬ ಶಾಲಾ ಸಂಚಾಲಕರ ಮಾತುಗಳು ಮಕ್ಕಳಿಗೆ ಪ್ರೇರಣೆಯನ್ನು ತಂದವು. ಏಳನೇ ತರಗತಿಯ ವಿದ್ಯಾರ್ಥಿಗಳ ಕೃತಜ್ಞತಾ ಭಾವದ ಗೀತೆ ಹಾಗೂ ಚಿಕ್ಕ ಮಕ್ಕಳ ಕಾರ್ಯಕ್ರಮ ಅತಿಥಿಗಳ ಮನಸೆಳೆಯಿತು. ಭಾವೀ ಜೀವನಕ್ಕೆ ಮುನ್ನಡೆಯುತ್ತಿರುವ ಮಕ್ಕಳಿಗೆ ಸರ್ವರೂ ಶುಭ ಹಾರೈಸುವ ಮೂಲಕ ಸಾರ್ಥಕತೆಯ ಬೀಳ್ಕೊಡುಗೆ ನೆರವೇರಿಸಲಾಯಿತು.

ಭಗಿನಿ ಅವೆಲಿನ, ಮುಖ್ಯೋಪಾಧ್ಯಾಯಿನಿ
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪೂರ